ಬೆಟಗೇರಿ ಕೃಷ್ಣಶರ್ಮ : -  (ಆನಂದಕಂದ)
1900-82. ಕನ್ನಡ ಕವಿ, ಕತೆಗಾರ, ಕಾದಂಬರಿಕಾರ, ಪತ್ರಿಕೋದ್ಯಮಿ, ವಿಮರ್ಶಕ. ಕನ್ನಡತನದ ಜಾಗೃತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಸಕ್ರಿಯವಾಗಿ ಭಾಗವಹಿಸಿದವರಲ್ಲಿ ಪ್ರಮುಖರು. ಇವರು ಪ್ರಧಾನವಾಗಿ 'ಆನಂದಕಂದ ಎಂಬ ಕಾವ್ಯನಾಮದಲ್ಲಿ ಬರೆದರೂ ಪತ್ರಿಕಾ ಸೇವೆಯ ಸಂದರ್ಭದಲ್ಲಿ ಅನೇಕ ಗುಪ್ತನಾಮಗಳಲ್ಲಿಯೂ ಬರೆದದ್ದುಂಟು. 

	ಬೆಳಗಾಂವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ 1900 ಏಪ್ರಿಲ್ 16 ರಂದು ಪಾಟೀಲಿಕೆಯ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಬೆಳಗಾಂವಿ, ಬೆಂಗಳೂರು ನಗರಗಳಲ್ಲಿ ಕೆಲಕಾಲ ಇದ್ದರಾದರೂ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಧಾರವಾಡದಲ್ಲಿ ಕಳೆದು 1982 ಅಕ್ಟೋಬರ್ 30ರಂದು ಅಲ್ಲೇ ನಿಧನರಾದರು. 

	ಹನ್ನೆರಡನೆಯ ವಯಸ್ಸಿನಲ್ಲಿ ತಂದೆ ಶ್ರೀನಿವಾಸರಾಯರನ್ನೂ ಹದಿನೆಂಟರಲ್ಲಿ ತಾಯಿ ರಾಧಾಬಾಯಿಯವರನ್ನೂ ಕಳೆದುಕೊಂಡು ತಬ್ಬಲಿಯಾದರು. ಹದಿನಾಲ್ಕುನೆಯ ವಯಸ್ಸಿನಲ್ಲಿ ಬಂದ ಪ್ಲೇಗಿನಲ್ಲಿ ಇವರು ಬದುಕುಳಿದರೂ ಶಾಶ್ವತವಾಗಿ ಸ್ವಲ್ಪ ಊನಗೊಂಡರು. ಅನೇಕ ವರ್ಷಗಳ ಕಾಲ ತೀವ್ರವಾದ ಅರ್ಧಾಂಗ ವಾಯುವಿನಿಂದ ಬಳಲಿದರು. ಎಳವೆಯಲ್ಲಿ ಅಣ್ಣ, ತಾರುಣ್ಯದಲ್ಲಿ ಪ್ರೀತಿಯ ತಮ್ಮ, ಇಳಿವಯಸ್ಸಿನಲ್ಲಿ ಪತ್ನಿ ತುಳಸಾಬಾಯಿ (ರುಕ್ಮಿಣಿ) (1957), ಮತ್ತೊಬ್ಬ ತಮ್ಮ ಹಾಗೂ ಮಗಳನ್ನು ಕಳೆದುಕೊಂಡ ದುರ್ದೈವಿ. ಜೀವನದ ಉದ್ದಕ್ಕೂ ಬಡತನ ಇವರನ್ನು ಬಿಡಲಿಲ್ಲ. 

	ಆಧುನಿಕ ಇಂಗ್ಲಿಷ್ ಶಿಕ್ಷಣ ಇವರಿಗೆ ಒದಗಲಿಲ್ಲ. 1917ರಲ್ಲಿ ಕನ್ನಡ ಮುಲ್ಕೀ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರೊಡನೆ ಇವರ ಔಪಚಾರಿಕ ಶಿಕ್ಷಣ ಕೊನೆಗೊಂಡಿತು. ಕಾವ್ಯಾನಂದರೆಂದು ಹೆಸರಾಗಿದ್ದ ಕಿತ್ತೂರ ನರಸಿಂಹಾಚಾರ್ಯರಲ್ಲಿ ಕೆಲಕಾಲ ಸಂಸ್ಕøತಾಧ್ಯಯನ ಮಾಡಿದರು ಅಷ್ಟೇ. ಇವರ ಕನ್ನಡ ಸಂಸ್ಕøತ ವಿದ್ವತ್ತೆಲ್ಲ ಸ್ವಯಾರ್ಜಿತವಾದುದು. 

	1923-24ರಲ್ಲಿ ಸ್ವಲ್ಪ ಕಾಲ ಇವರು ಬೆಳಗಾಂವಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. 1921-25ರ ನಡುವೆ ಸ್ವಲ್ಪಕಾಲ ರಾಷ್ಟ್ರೀಯ ಶಾಲೆಗಳಲ್ಲಿಯೂ 1920ರಲ್ಲಿ ಅಲ್ಪಕಾಲ ಬೆಂಗಳೂರಿನ ಆರ್ಯವಿದ್ಯಾ ಶಾಲೆಯಲ್ಲಿಯೂ ಶಿಕ್ಷಕರಾಗಿದ್ದರು. ಅಲ್ಲಿಂದ ತಮ್ಮ ಮುಂದಿನ ಜೀವನವನ್ನು ಸಾಹಿತ್ಯ ವೃತ್ತಿಯಲ್ಲಿ ಕಳೆದರು. 
ತಾಯಿಯ ಬಾಯಲ್ಲಿ ಕೇಳಿದ ದಾಸರ ಭಕ್ತಿ ಗೀತೆಗಳು, ಜನಪದದ ಲಾವಣಿಗಳು ಇವುಗಳ ಸಂಸ್ಕಾರದಿಂದ ಬಾಲ್ಯದಲ್ಲೇ ಕವಿತಾ ರಚನೆಯಲ್ಲಿ ತೊಡಗಿದರು. 1918ರ ವೇಳೆಗಾಗಲೆ ಧಾರವಾಡದ ಕವಿತಾ ಪತ್ರಿಕೆಯಾದ ಪ್ರಭಾತ ದಲ್ಲಿ ಇವರ ಕವನಗಳು ಪ್ರಕಟವಾದವು. ಅವನ್ನು ಮೆಚ್ಚಿದ ಕಾವ್ಯಾನಂದರು ಇವರಿಗಿ" ಕವಿಭೂಷಣ "ಎಂಬ ಬಿರುದನ್ನು ಕೊಟ್ಟರು. ಬೆಳಗಾಂವಿಯಲ್ಲಿ ಕನ್ನಡದ ಪುನರುಜ್ಜೀವನದ ಕಹಳೆಯೂದಿ ಇವರು ರಚಿಸಿದ "ಕರ್ನಾಟಕಾಂಬೆ ನೀ ಧನ್ಯೆ ಧನ್ಯೆ ಎಂಬ ನಾಡಗೀತೆ "ತುಂಬ ಜನಪ್ರಿಯವಾಯಿತು. 1924ರಲ್ಲಿ ಬೆಳಗಾಂವಿಯಲ್ಲಿ ಜರಗಿದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಸ್ವಾಗತಗೀತೆ ರಚಿಸಿದವರೂ ಇವರೇ. ಇವರ ದೇಶ ಭಕ್ತಿ ಗೀತೆಗಳು ಪುಸ್ತಕ ರೂಪದಲ್ಲಿಯೂ ಹೊರಬಂದುವು. 

ನಾಡ ಅಭಿಮಾನ ಎಚ್ಚರಿಸಲು ನಾಡಹಬ್ಬದ ಆಚರಣೆ ಎಂಬ ಕಲ್ಪನೆ ಇವರದೇ. ಅದಕ್ಕಾಗಿ ಇವರು ಕನ್ನಡ ನಾಡನ್ನೆಲ್ಲಸುತ್ತಿದರು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಜನ ಜಾಗೃತಿಗಾಗಿ ಬಳಸಿದ ಇವರು ಮುಂದೆ ಆ ಇತಿಹಾಸವನ್ನು ತಮ್ಮ ಮೂರು ಕಾದಂಬರಿಗಳಿಗೆ ವಸ್ತುವಾಗಿ ಮಾಡಿಕೊಂಡರು. 

ಕವಿತಾ ಸಂಗ್ರಹ, ಕಥಾಸಂಗ್ರಹ, ಕಾದಂಬರಿ, ರೇಡಿಯೋ ರೂಪಕಗಳು ಚರಿತ್ರೆ, ವಿಮರ್ಶ ಮುಂತಾದ ಪ್ರಕಾರಗಳಲ್ಲಿ ಸುಮಾರು 35 ಸ್ವತಂತ್ರ ಕೃತಿ ರಚನೆ ಮಾಡಿರುವರಲ್ಲದೆ ಜನಪದ ಹಾಗೂ ದಾಸ ಸಾಹಿತ್ಯಗಳಲ್ಲೂ ಕೈಯಾಡಿಸಿದ್ದಾರೆ. ಪತ್ರಿಕಾ ವ್ಯವಸಾಯದಲ್ಲೂ ಇವರ ಹೆಸರು ಮರೆಯಲಾರದಂಥದು.

	ಪತ್ರಿಕಾವೃತ್ತಿ: 1923ರಲ್ಲಿ ಬೆಳಗಾಂವಿಯಲ್ಲಿ ಮಾತೃಭೂಮಿ ಪತ್ರಿಕೆಯಲ್ಲಿ ಸೇರ್ಪಡೆಯಾದರು. 1925ರಲ್ಲಿ ಧಾರವಾಡದ ಹೆಸರಾಂತ ಸ್ವಧರ್ಮ ಪತ್ರಿಕೆಯ ಸಂಪಾದಕರಾಗಿ ಜಯಕರ್ನಾಟಕ ಪತ್ರಿಕೆ ಹಾಗೂ ಗ್ರಂಥ ಮಾಲಾ ಸಂಪಾದಕ ಮಂಡಳಿಯಲ್ಲಿಯೂ ಪ್ರಮುಖರೆನಿಸಿದರು. 1938ರಿಂದ 1961ರ ತನಕ ಧಾರವಾಡದಿಂದ ಹೊರಡುತ್ತಿದ್ದ ಜಯಂತಿ ಮಾಸಪತ್ರಿಕೆಗೆ ಇವರೇ ಸಂಪಾಕದರೂ ಹೊಣೆಗಾರರೂ ಆಗಿದ್ದರು. ಜಯಂತಿ ಕನ್ನಡದ ಮಾಸಿಕಗಳ ಇತಿಹಾಸದಲ್ಲಿ ಮೈಲಿಗಲ್ಲು. ಕಥೆ, ಕವಿತೆ, ವಿಮರ್ಶೆ, ನಗೆ ಬರಹಗಳಲ್ಲದೆ ಪ್ರಚಲಿತ ಸಾಮಾಜಿಕ, ರಾಜಕೀಯ, ಐತಿಹಾಸಿಕ ಮುಂತಾದವುಗಳ ಬಗ್ಗೆ ಅದರಲ್ಲಿ ತಿಳಿಯಾದ ಲೇಖನಗಳು ನಿರಂತರವಾಗಿ ಬಂದುವು. ಅಂದಿನ ಹೆಸರಾಂತ ಅನೇಕ ಸಾಹಿತಿಗಳು ಅದಕ್ಕೆ ಬರೆಯುತ್ತಿದ್ದರು; ಹಾಗೆಯೇ ಹೊಸ ಹೊಸ ಲೇಖಕರನೇಕರನ್ನು ಅದು ಬೆಳಕಿಗೆ ತಂದಿತು. ಬೆಟಗೇರಿಯವರು ಈ ಪತ್ರಿಕೆಯಿಂದಾಗಿ ಅಪಾರ ಶ್ರಮ ಹಾಗೂ ಆರ್ಥಿಕ ಹಾನಿ ಅನುಭವಿಸಿದರು. ಕೊನೆಗೆ ಅದು ಸಂಪಾದಕರ ಅನಾರೋಗ್ಯ ಮತ್ತು ಆರ್ಥಿಕ ಭಾರದಿಂದ ನಿಂತಿತು. 

	ಕಾವ್ಯ: ಆನಂದಕಂದ ಎಂಬ ಕಾವ್ಯನಾಮದಲ್ಲಿ ಬರೆದ ಇವರ ಕವಿತೆಗಳು ಸುಮಾರು 13 ಸಂಕಲನಗಳಲ್ಲಿ ಸೇರ್ಪಡೆಯಾಗಿವೆ. ಅವುಗಳಲ್ಲಿ ಮುದ್ದನ ಮಾತು, ಅರುಣೋದಯ, ವಿರಹಿಣಿ, ಒಡನಾಡಿ, ಕಾರಹುಣ್ಣಿವೆ, ನಲ್ವಾಡುಗಳು ಉತ್ಸಾಹಿಗಾಥಾ ಮತ್ತು ಸಾಮಾಜಿಕನ ಸಂವಚನಗಳು ಪ್ರಮುಖವಾದುವು. ಆಧುನಿಕ ಮತ್ತು ಜಾನಪದ ಎರಡೂ ಶೈಲಿಗಳಲ್ಲಿ ರಚನೆಯಾಗಿರುವ ಕೆಲವು ಶ್ರೇಷ್ಠ ಗೀತೆಗಳನ್ನು ಈ ಸಂಗ್ರಹಗಳಲ್ಲಿ ಕಾಣಬಹುದು. ಭಾಷೆಯಲ್ಲಿ ನೆಲದ ಸೊಗಡು, ಭಾವದಲ್ಲಿ ಸುಸಂಸ್ಕಾರ, ಉದ್ರೇಕಕ್ಕೇರದ ಉತ್ಕಟತೆ, ಆಶಾವಾದ, ಸಮದೃಷ್ಟಿ, ದಾರ್ಶನಿಕತೆ-ಇವು ಬೆಟಗೇರಿಯವರ ಕಾವ್ಯದ ಪ್ರಮುಖ ಲಕ್ಷಣಗಳು. 

	ಸಣ್ಣಕತೆ: ಆರು ಸಣ್ಣ ಕಥೆಗಳ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಪ್ರಥಮ ಸಂಗ್ರಹ ಬಡತನದ ಬಾಳು 1932ರಲ್ಲಿ ಪ್ರಕಟವಾಯಿತು. ಅಂದಿನಿಂದ 1969ರ ತನಕ ಸಂಸಾರ ಚಿತ್ರ, ನಮ್ಮ ಬದುಕು, ಮಾತಾಡುವ ಕಲ್ಲು, ಜನಪದಜೀವನ ಮತ್ತು ಕಳ್ಳರ ಗುರು ಮತ್ತು ಇತರ ಕಥೆಗಳು ಬಂದುವು. ಸಂಗ್ರಹಗಳ ಹೆಸರುಗಳು ಆಯಾ ಸಂಗ್ರಹದ ಪ್ರಧಾನ ವಸ್ತುವನ್ನು ನಿರ್ದೇಶಿಸುತ್ತವೆ. ಇವರ ಕಥೆಗಳಲ್ಲಿ ಹೆಚ್ಚಾಗಿ ಗ್ರಾಮಜೀವನ ಅದೂ ಬ್ರಾಹ್ಮಣ ಸಮಾಜದ್ದು ಪ್ರಾಧಾನ್ಯ ಪಡೆದರೂ ಜಾತ್ಯಾತೀತವಾದ ಗ್ರಾಮೀಣ ಸಾಮರಸ್ಯದ ಚಿತ್ರಣವಿದೆ. ವಿಶೇಷವಾಗಿ ಮಾತನಾಡುವ ಕಲ್ಲಿನ ಕಥೆಗಳು ಕನ್ನಡ ಕಥಾರಂಗದಲ್ಲಿ ಒಂದು ಹೊಸ ದಾರಿ ತೆರೆದಿವೆ. ಅತಿ ಐತಿಹಾಸಿಕ ಎನ್ನಬಹುದಾದ ಈ ಕಥೆಗಳು ನಾಡಿನ ಗ್ರಾಮಗಳ ಗತಕಾಲದ ಜನ ಸಾಮಾನ್ಯರ ಶೌರ್ಯ, ನಂಬಿಕೆ, ಸುಖದುಃಖಗಳನ್ನು ರೇಖಿಸುತ್ತವೆ. 

	ಕಾದಂಬರಿಗಳು: ಇವರ ಐದು ಕಾದಂಬರಿಗಳ ಪೈಕಿ ಸುದರ್ಶನ, ಮಗಳ ಮದುವೆ ಇವು ಸಾಮಾಜಿಕ; ರಾಜಯೋಗಿ, ಅಶಾಂತಿಪರ್ವ, ಮಲ್ಲಿಕಾರ್ಜುನ ಇವು ಮೂರು ಐತಿಹಾಸಿಕ. ಕನ್ನಡದಲ್ಲಿ ಸ್ವತಂತ್ರವಾಗಿ ಕಾದಂಬರಿಗಳನ್ನು ಬರೆಯ ತೊಡಗಿದವರಲ್ಲಿ ಇವರು ಮೊದಲಿಗರು. ಆನಂದಕಂದರ ಶ್ರೇಷ್ಠತೆ ಕಾಣಿಸುವುದು ಇವರ ಐತಿಹಾಸಿಕ ಕಾದಂಬರಿಗಳಲ್ಲಿ. ಅವು ಮೂರೂ ವಿಜಯನಗರದ ಇತಿಹಾಸವನ್ನು ಆಧರಿಸಿದವು. ಗಳಗನಾಥರು ಸ್ವತಂತ್ರ ಐತಿಹಾಸಿಕ ಕಾದಂಬರಿಗಳ ಪ್ರವರ್ತಕರಾಗಿದ್ದರೂ ಆನಂದಕಂದರು ಹೆಚ್ಚಿನ ಐತಿಹಾಸಿಕ ಅಧ್ಯಯನ, ಪ್ರಜ್ಞೆ, ಗತಕಾಲದ ರಾಜಕೀಯ, ಸಾಮಾಜಿಕ ವಾಸ್ತವತೆಯ ಗಾಢ ತಿಳಿವಳಿಕೆಗಳನ್ನು ಪ್ರದರ್ಶಿಸಿ ಹೊಸ ಮಾರ್ಗದಲ್ಲಿ ನಡೆದಿದ್ದಾರೆ. ಶೈಲಿ ಹಾಗೂ ಕಲೆಗಾರಿಕೆಯಿಂದಾಗಿ ಈ ಕಾದಂಬರಿಗಳು ಶ್ರೇಷ್ಠ ಎನಿಸಿವೆ. 

	ಆರು ರೇಡಿಯೋ ರೂಪಕಗಳನ್ನು ರಚಿಸಿದ್ದಾರೆ. ಸೃಜನಾತ್ಮಕದ ಹೊರಗೆ ಸಾಹಿತ್ಯ-ಸಂಸ್ಕøತಿ ವಿಮರ್ಶೆ ಒಳಗೊಂಡ ಇವರ ಕರ್ನಾಟಕ ಜನ ಜೀವನ, ನಮ್ಮ ಸಂಸ್ಕøತಿ ಪರಂಪರೆ, ಸಾಹಿತ್ಯವು ಸಾಗಿರುವ ದಾರಿ, ಸಾಹಿತ್ಯ ವಿಹಾರ ಹೆಸರಿಸ ತಕ್ಕವಾಗಿವೆ. ಪರಂಪರೆಯನ್ನು ಸಹಾನುಭೂತಿಪರವಾಗಿ, ಆದರೆ ಗತಕಾಲಕ್ಕೆ ಜೋತುಬೀಳದೆ ವಿವರಿಸುತ್ತಾರೆ. 

	ಗ್ರಂಥ ಸಂಪಾದನೆಯ ಕಾರ್ಯ ಕೂಡ ಸಮರ್ಥವಾಗಿ ನಿರ್ವಹಿಸಿದ್ದಾರೆ. ಪುರಂದರದಾಸರ ಕೃತಿಗಳ ಆರು ಸಂಪುಟಗಳು, ಕನ್ನಡದಾಸರ ಭಕ್ತಿಗೀತೆಗಳು ಪ್ರಸನ್ನ ವೆಂಕಟದಾಸರ ಭಾಗವತ, ಅಕ್ರೂರಚರಿತ್ರೆ ಇವುಗಳ ಸಂಗ್ರಹ, ಸಂಪಾದನೆ ವಿದ್ವತ್ಪೂರ್ಣವಾದುದು. 

	ಜಯಂತಿ ಸಂಪಾದಕರಾಗಿ ಇವರು ಬರೆದ ಅಸಂಖ್ಯ ಟಿಪ್ಪಣಿಗಳು ಮತ್ತು ನಗೆ ಬರಹಗಳು ಸಂಗ್ರಹ ರೂಪದಲ್ಲಿ ಬೆಳಕುಕಾಣದೆ ಉಳಿದಿವೆ. 

	ಬೆಟಗೇರಿಯವರು ಸ್ವಭಾವತಃ ವಿನಯಶೀಲರಾಗಿದ್ದರು. ಅವರ ವಿದ್ವತ್ತು ಅವರೊಡನೆ ಸಂಭಾಷಿಸಿ ಕೆದಕಿದರೆ ಮಾತ್ರ ಬೆಳಕಿಗೆ ಬರುವಂಥದಾಗಿತ್ತು. ಕುಮಾರವ್ಯಾಸ ಭಾರತದ ವಿಷಯದಲ್ಲಿ ಅಧಿಕಾರವಾಣಿಯಲ್ಲಿ ಮಾತಾಡ ಬಲ್ಲವರಾಗಿದ್ದರು.

	ಇವರಿಗೆ ದೊರೆತ ಗೌರವಗಳಲ್ಲಿ ಜಮಖಂಡಿಯ ಕವಿ ಸಮ್ಮೇಳನದ ಅಧ್ಯಕ್ಷತೆ (1939); ಕನ್ನಡ ಸಣ್ಣ ಕಥೆಗಳ ಸಮ್ಮೇಳನದ ಅಧ್ಯಕ್ಷತೆ (1948); ಮಗಳ ಮದುವೆ ಕಾದಂಬರಿಗೆ ಮುಂಬಯಿ ಸರ್ಕಾರ ನೀಡಿದ ಪ್ರಥಮ ಬಹುಮಾನ (1951), ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (1971); ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1973) ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ (1974) ಪದವಿ ಉಲ್ಲೇಖಾರ್ಹವಾಗಿವೆ. 1960ರಲ್ಲಿ ಇವರ ಷಷ್ಟಿಪೂರ್ತಿ ಸಮಾರಂಭ ನಡೆಯಿತು. 1982ರಲ್ಲಿ ಇವರಿಗೆ ಧಾರವಾಡದಲ್ಲಿ ಸಾರ್ವಜನಿಕ ಸತ್ಕಾರ ಸಮಾರಂಭ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಇವರ ಜೀವನ, ಸಾಹಿತ್ಯಗಳನ್ನು ಪ್ರಧಾನವಾಗಿಟ್ಟುಕೊಂಡು ಆನಂದಕಂದ,                                               
 ""ಬೆಳುವಲ ""ಅಭಿನಂದನ ಗ್ರಂಥಗಳು ಮತ್ತು ಕವಿಭೂಷಣ ಎಂಬ ಸತ್ಕಾರ ಸ್ಮರಣ ಸಂಚಿಕೆ ಪ್ರಕಟವಾದುವು. 1980ರಲ್ಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇವರನ್ನು ಮನೆಯಲ್ಲೇ ಸತ್ಕರಿಸಿದರು. 		   
  (ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ